ಕಾಶೀನಾಥ್, ಕೆ

 (1944-) ಕಳೆದ ನಾಲ್ಕು ವರ್ಷಗಳಿಂದ ಈಚೆಗೆ ಕರ್ನಾಟಕದಲ್ಲಿ ಮಾತ್ರವಲ್ಲ ರಾಷ್ಟ್ರದ ನಾನಾ ಭಾಗಗಳಲ್ಲಿ ಬೃಹದಾಕಾರದ ಸುಂದರವಾದ ದೇವಾಧಿದೇವತೆಗಳ ಮೂರ್ತಿಗಳು ಕಾಣಿಸಿಕೊಳ್ಳುತ್ತಿವೆ. ಗಾರೆ, ಸಿಮೆಂಟನ ಈ ಚೆಲುವಿನ ಶಿಲ್ಪಗಳ ಸೃಷ್ಟಿಕರ್ತ ಕೆ.ಕಾಶೀನಾಥ್ ಕರ್ನಾಟಕದ ಶಿವಮೊಗ್ಗದವರು. 1944 ಜನವರಿ 2ರಂದು ಶಿರಾಳಕೊಪ್ಪದಲ್ಲಿ ಜನಿಸಿದ ಕಾಶಿನಾಥ್‍ರ ತಂದೆ ಕೃಷ್ಣರಾಯರು. ತಾಯಿ ಪಾರ್ವತಮ್ಮ, ಕಲೆ ವಂಶಪಾರಂಪರ್ಯವಾಗಿ ಬಂದಿದ್ದು. ತಾಯಿಯ ತಂದೆ ಪರಸಪ್ಪ-ಪರಶುರಾಮಪ್ಪ. ಪ್ರಬುದ್ಧ ಶಿಲ್ಪಕಲಾ ಪ್ರವೀಣರು. ತಾತನ ಸಾನ್ನಿಧ್ಯದಲ್ಲಿ ಶಿಲೆ, ಲೋಹ, ಕಾಷ್ಠ ಹಾಗೂ ಮಣ್ಣಿನ ಕಲೆಯಲ್ಲಿ ಪರಿಣಿತಿ ಪಡೆದರು. ಮುತ್ತಜ್ಜ ಕೆ. ತಿಪ್ಪಾಜಪ್ಪ ಸಾಂಪ್ರಾದಾಯಿಕ ಚಿತ್ರಕಲಾ ಪ್ರವೀಣರು. ಮುಮ್ಮಡಿ ಕೃಷ್ಣರಾಜರ ಆಸ್ಥಾನದಲ್ಲಿ ಅನೇಕ ಪಾರಿತೋಷಕ, ಪುರಸ್ಕಾರಗಳನ್ನು ಪಡೆದವರು. ಅವರು ರಚಿಸಿದ ಅಪೂರ್ವ ರೇಖಾಚಿತ್ರಗಳು ಕಾಶೀನಾಥರ ಕುಟುಂಬದ ಸಂಗ್ರಹದಲ್ಲಿವೆ (ಇತ್ತೀಚೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ತಿಪ್ಪಾಜಪ್ಪನವರ ರೇಖಾಚಿತ್ರಗಳ ಸಂಪುಟವನ್ನು ಪ್ರಕಟಿಸಿದೆ). ಮುತ್ತಜ್ಜನ ಕಲಾಕೃತಿಗಳಲ್ಲಿನ, ಸೌಂದರ್ಯಾತಿಶಯತೆ ಹಾಗೂ ಮದರಾಸಿನಲ್ಲಿ ದೊರೆತ ಆಧುನಿಕ ಕಲಾ ವಿನ್ಯಾಸ ಪದ್ಧತಿ ಕಾಶೀನಾಥರ ಕಲಾದೃಷ್ಟಿಯನ್ನು ಪರಿಪಕ್ವಗೊಳಿಸಿದವು.

 ಶಿರಾಳಕೊಪ್ಪದ ಆರು ಅಡಿ ಎತ್ತರದ ಗಣೇಶ ಬಿಂಬ ಇವರ ಮೊದಲ ಕಲಾಕೃತಿ (1960) ಮರುವರ್ಷ ಶಿವಮೊಗ್ಗೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಖಮಂಟಪ ನಿರ್ಮಿಸಿ ನೈಜ ಅಳತೆಯ ದ್ವಾರಪಾಲಕ ಮೂರ್ತಿಗಳನ್ನು ತೈಲಚಿತ್ರ ಮಾಧ್ಯಮದಲ್ಲಿ ರಚಿಸಿದರು. 1963ರಲ್ಲಿ ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಉದ್ಯಾನವನದಲ್ಲಿಯೇ ಆರಡಿ ಎತ್ತರದ ಗಣಪತಿ ಮೂರ್ತಿಯನ್ನು ಮಣ್ಣಿನಲ್ಲಿ ರಚಿಸಿದ್ದು, ಗಣೇಶನ ಹಬ್ಬದ ವೇಳೆಯಲ್ಲಿ ಪೂಜಿಸಿ ನಂತರ ವಿಸರ್ಜಿಸಲಾಯಿತು. ಆದರೂ ಅದರ ಗಾತ್ರ, ಕಸಬುಗಾರಿಕೆಗಳಿಂದಾಗಿ ಕಾಶೀನಾಥರಿಗೆ ಹೆಸರು ಕೀರ್ತಿಗಳನ್ನು ತಂದವು. ಬೃಹತ್ ಮೂರ್ತಿ ರಚನೆಗಳ ಬಗ್ಗೆ ಆತ್ಮವಿಶ್ವಾಸ ಬಂದಿತು.

 ನಮ್ಮ ರಾಜ್ಯದ ಶಿಲ್ಪ ಕೆಲಸಕ್ಕೆ ತಮಿಳುನಾಡಿನ ಶಿಲ್ಪಿಗಳೇ ಬರಬೇಕೆ? ಇಲ್ಲಿ ಯಾರೂ ಸಮರ್ಥರಿಲ್ಲವೇ? ಎಂಬ ಪ್ರಶ್ನೆ ಕಾಶೀನಾಥರ ಮನದಲ್ಲಿ ಮೂಡಿತು. ತಾವೇ ಯಾಕೆ ಸವಾಲಾಗಿ ಸ್ವೀಕರಿಸಬಾರದೆಂಬ ಯೋಚನೆ ಬಂತು ಅಲ್ಲಿಗೇ ಹೋಗಿ ಅವರ ಪದ್ಧತಿ ಕಲಿಯಬೇಕೆಂಬ ಇಚ್ಛೆಯಿಂದ 1966ರ ಸುಮಾರಿನಲ್ಲಿ ಚೆನ್ನೈಗೆ ಹೋಗಿ ತಮ್ಮ ಬಂಧು ವೀರಪ್ಪಾಚಾರ್ಯರ ನೆರವಿನಿಂದ ಅಲ್ಲಿಯ ಶಿಲ್ಪಿಗಳು ಮಣ್ಣು, ಗಾರೆ, ಸಿಮೆಂಟು ಇತ್ಯಾದಿಗಳಿಂದ ಶಿಲ್ಪ ರಚನೆ ಮಾಡುವ ಕೌಶಲ್ಯ, ಪದ್ಧತಿ, ಶೈಲಿಗಳನ್ನು ಅಭ್ಯಸಿಸಿ ಬಂದರು. ಮಣ್ಣು ಗಾರೆಗಳಿಗಿಂತ ಸಿಮೆಂಟಿನಲ್ಲಿ ಕೃತಿ ರಚಿಸಬಾರದೇಕೆಂಬ ಕಾರಣದಿಂದ ಅದನ್ನೇ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡರು.

 ಕಾಶೀನಾಥರು ಚೆನ್ನೈಗೆ ಹೋಗುವ ಮೊದಲೇ 1965ರಲ್ಲಿ ಹರಿಹರ ತಾಲ್ಲೂಕಿನ ಕುಮಾರನಹಳ್ಳಿಯ ರಂಗನಾಥ ದೇವಾಲಯದಲ್ಲಿ ದತ್ತಾತ್ರೇಯ ಮೂರ್ತಿ ಹಾಗೂ ಮಂಟಪಗಳನ್ನು ಸಿಮೆಂಟಿನಿಂದ ನಿರ್ಮಿಸಿದ್ದರಾದರೂ ಚೆನ್ನೈನಿಂದ ಬಂದ ಮೇಲೆ 1967ರಲ್ಲಿ ಶಿಕಾರಿಪುರದ ದತ್ತಮಂದಿರಕ್ಕೆ ನಾಗರ ಶೈಲಿಯಲ್ಲಿ ಇಪ್ಪತ್ತು ಅಡಿಗಳಿಗೂ ಮಿಕ್ಕಿದ ಗೋಪುರ ನಿರ್ಮಾಣ ಅವರ ಮೊದಲ ಬೃಹತ್ ರಚನೆ. 1975ರಲ್ಲಿ ತುಮಕೂರುಗಳಲ್ಲದೆ ದಕ್ಷಿಣ ಕನ್ನಡ, ಉಡುಪಿ ತಾಲ್ಲೂಕುಗಳಲ್ಲೂ ದೇವಾಲಯ ರಥ ಶಿಲ್ಪ ನಿರ್ಮಿಸಿದ್ದು ಆ ಪ್ರದೇಶದಲ್ಲಿಯೂ ಕಾಶೀನಾಥರ ಹೆಸರು ಪ್ರಸಿದ್ಧವಾಯಿತು.

 ಮೂರ್ತಿಯ  ಎತ್ತರ, ಭಾರದ ಲೆಕ್ಕಾಚಾರ ಅದಕ್ಕೆ ಅನುಗುಣವಾಗಿ ಭದ್ರವಾದ ತಳಪಾಯ ರಚನೆ, ಅದರ ಮೇಲೆ, ಶಿಲ್ಪಕ್ಕೆ ಅಗತ್ಯವಾದ ಕಬ್ಬಿಣದ ಕಂಬಿಗಳ ಹಂದರ ನಿರ್ಮಾಣ. ಸಿಮೆಂಟ್ ಗಾರೆಗಳ ಹೊದಿಕೆ, ಪ್ರಮಾಣಬದ್ಧ ಅಂಗರಚನೆ, ಜೀವಂತ ಕಳೆ ಹಿತಮಿತವಾದ ಆಭರಣಗಳ ಶೃಂಗಾರ. ನೈಜತೆ ತುಂಬುವ ವರ್ಣಲೇಪ. ಕಾಶಿನಾಥರ ಶಿಲ್ಪಗಳ ವೈಶಿಷ್ಟ್ಯ ಬೆಂಗಳೂರಿನ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ 65 ಅಡಿಗಳ ಎತ್ತರದ ಕೈಲಾಸ ಶಂಕರ, ಸಾಗರದಲ್ಲಿನ 100 ಅಡಿ ಎತ್ತರದ ಗೋಪುರವಿರುವ ರಥರೂಪದ ದೇವಾಲಯ ಅದರಲ್ಲಿನ ವೈವಿಧ್ಯಮಯ ಶಿಲ್ಪಸಂಗ್ರಹ ಅನನ್ಯವಾದುದು. ನೆಲಮಂಗಲದ ವಿಶ್ವ ಶಾಂತಿ ಆಶ್ರಮದಲ್ಲಿರುವ ವಿಷ್ಣುವಿನ ವಿಶ್ವರೂಪ, ಗೀತೋಪದೇಶ ಶಿಲ್ಪಗಳು ಕರ್ನಾಟಕದಲ್ಲಿನ ಕೆಲವು ಮನೋಜ್ಞ ಬೃಹತ್ ಶಿಲ್ಪಗಳು. ಕರ್ನಾಟಕವಲ್ಲದೆ, ಹಿಮಾಚಲದ ಸಿದ್ಧಬಾರಿಯಲ್ಲಿ 30 ಅಡಿ ಎತ್ತರದ ಆಂಜನೇಯ, ಅಹಮದಾಬಾದ್‍ನಲ್ಲಿ 60 ಅಡಿಗಳ ಪ್ರಸನ್ನಾಂಜನೇಯ, ಮಧ್ಯಪ್ರದೇಶದ ಚಿನ್ಮಯಾನಂದ ಆಶ್ರಮಕ್ಕೆ ಶ್ರೀರಾಮ ದೇವಾಲಯ ನಿರ್ಮಾಣ, ಆಂಧ್ರ ಪ್ರದೇಶದ ಪುಟ್ಟಪರ್ತಿಯ ಸಾಯಿಬಾಬಾ ಆಶ್ರಮಕ್ಕೆ ಹಲವಾರು ಗೋಪುರಗಳು, ಹೃಷಿಕೇಶದ ಕೈಲಾಸ ಆಶ್ರಮ, ದ್ವಾರಕಾ ಬಳಿಯ ನಾಗೇಶ್ವರ ದೇವಾಲಯದ ಶಿವಮೂರ್ತಿ ಇವರ ರಚನೆಯ ಶಿಲ್ಪಗಳಲ್ಲಿ ಕೆಲವು. ಅಂತೆಯೇ 1997ರಲ್ಲಿ ದ್ವಾರಕೆಯಲ್ಲಿ 65 ಅಡಿ ಎತ್ತರದ ಧ್ಯಾನಾಸಕ್ತ ಶಿವ ಹಾಗೂ ಬಿಡದಿ ಬಳಿಯ ಈಗಲ್‍ಟನ್ ಕಂಪನಿಯವರಿಗೆ ಸಪ್ತಾಶ್ವಗಳೊಂದಿಗೆ ರಥವೇರಿ ಬರುತ್ತಿರುವ ಸೂರ್ಯನ ಶಿಲ್ಪ ರಚಿಸಿದರು. ಸೂರ್ಯನ ಹಿಂದಿನ ಪ್ರಭಾಮಂಡಲವೇ ಅರುವತ್ತು ಅಡಿ ವ್ಯಾಸವುಳ್ಳದ್ದೆಂದರೆ ಇಡೀ ಮೂರ್ತಿ, ರಥ ನಾಗಾಲೋಟದಲ್ಲಿರುವ ಕುದುರೆಗಳ ಒಟ್ಟು ಸಂಯೋಜನೆಯ ಬೃಹದಾಕಾರ ಕಲ್ಪನೆಗೂ ಮೀರಿದ್ದು. ಇವುಗಳಿಗೆಲ್ಲ ಕಲಶವಿಟ್ಟಂತೆ 2002ರಲ್ಲಿ ಉತ್ತರ ಕನ್ನಡದ ಮುರ್ಡೇಶ್ವರದಲ್ಲಿ 123 ಅಡಿ ಎತ್ತರದ ಧ್ಯಾನಸ್ತ ಶಿವ ಮುಗಿಲು ಮುಟ್ಟುವಂತಿದೆ. 

 ಸಿಮೆಂಟ್ ಮಾಧ್ಯಮದಿಂದ ಜನಪ್ರಿಯವಾದರೂ, ಕಾಶಿನಾಥ್ ಲೋಹ, ಶಿಲೆ ಕಾಷ್ಠ ಶಿಲ್ಪಗಳಲ್ಲೂ ಪರಿಣಿತರು. ಚಾಮುಂಡೇಶ್ವರಿಯ ಶಿಲಾ ಶಿಲ್ಪ, ಗುರು ಕರಿಬಸವೇಶ್ವರ ಸ್ವಾಮಿ ಗದ್ದುಗೆಯ ಮರದ ರಥ, ಉಕ್ಕಡಗಾತ್ರಿಯ ಬೆಳ್ಳಿಯ ಮೂರ್ತಿ, ಅಮೆರಿಕೆಯ ವಾಷಿಂಗ್‍ಟನ್ ಚಿನ್ಮಯಾನಂದ ಆಶ್ರಮಕ್ಕೆ ಒಂಬತ್ತು ಅಡಿ ಎತ್ತರದ ಕಾಷ್ಠ ಮಂಟಪ, ಇವು ಕೆಲವು ಕಲಾಕೃತಿಗಳನ್ನು ಉಲ್ಲೇಖಿಸಬಹುದು. ಚಿನ್ನ ಬೆಳ್ಳಿ ಮೊದಲಾದ ಲೋಹ ಶಿಲ್ಪಗಳನ್ನೂ ರಚಿಸಿದ್ದಾರೆ. ಆದರೆ ದೇವಾಲಯಗಳ ಮತ್ತು ಬೃಹದ್ ಗಾತ್ರದ ದೇವಾತಾ ಮೂರ್ತಿಗಳು ಸೃಷ್ಟಿಕರ್ತರೆಂದೇ ಜನರು ಇವರನ್ನು ಗುರುತಿಸುತ್ತಾರೆ.  

ಕಾಶೀನಾಥ್ ಅವರಿಗೆ ಈಚಿನ ವರ್ಷಗಳಲ್ಲಿ ಇನ್ನಿತರ ಶಿಲ್ಪಗಳನ್ನು ರಚಿಸುತ್ತಿರುವರಾದರೂ ಬೃಹದ್ ಶಿಲ್ಪಗಳ ರಚನೆಯನ್ನು ತಮ್ಮ ಕೆ. ಜ್ಞಾನೇಶ್ವರ ಹಾಗೂ ಮಕ್ಕಳಾದ ಶ್ರೀಧರಮೂರ್ತಿ, ನಾಗಭೂಷಣ ಅವರಿಗೆ ವಹಿಸಿದ್ದಾರೆ. ಮಗಳು ಶ್ರೀದೇವಿ ಸಹ ಆರ್ಕಿಟೆಕ್ಟ್ ಪದವಿಯನ್ನು ಪಡೆದಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಸಲ್ಲಿಸಿರುವ ಸೇವೆ ಅಮೂಲ್ಯ. ಸಾರ್ವಜನಿಕ ಸಂಘಸಂಸ್ಥೆಗಳು ನೀಡಿದ ಪ್ರಶಸ್ತಿ ಸನ್ಮಾನಗಳು ಅಸಂಖ್ಯ. 2000ನೆ ಸಾಲಿನ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿಯಲ್ಲದೆ, 2004ನೇ ಸಾಲಿನ ಕರ್ನಾಟಕದ ಜಕಣಾಚಾರಿ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.    *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ